About Us

ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ ಪ್ರೌಢಶಾಲೆಗೆ ಸ್ವಾಗತ

ಕರ್ನಾಟಕದ ಕಾಶ್ಮೀರ, ನಿಸರ್ಗ ತಾಣ, ಭೂಲೋಕದ ಸ್ವರ್ಗ ಎಂಬ ಬಿರುದಾವಳಿಗಳನ್ನು ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಹಲವು ವೈವಿಧ್ಯತೆವುಳ್ಳ ಸುಂದರ ಪ್ರಾಕೃತಿಕ ರಮ್ಯ ತಾಣವಾದ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಕ್ರಿಸ್ತಶಕ 1967 ರಲ್ಲಿ ಪ್ರಾರಂಭವಾದ ನಮ್ಮದೊಂದು ಸುಂದರ ಶಾಲೆ. ಶಾಲೆಯು 8 ರಿಂದ 10 ನೇ ತರಗತಿಯ ತರಗತಿಗಳನ್ನು ಒಳಗೊಂಡಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಶಿಕ್ಷಣದ ಗುಣಮಟ್ಟವನ್ನು ತಲಿಪಿಸುವ ಎಲ್ಲಾ ಆಧುನಿಕ ಮೂಲ ಸೌಕರ್ಯಗಳನ್ನ ಹಾಗು ಉನ್ನತ ಮಟ್ಟದ ಅಧ್ಯಾಪಕ ವೃಂದವನ್ನು ಹೊಂದಿದೆ. ಶಾಲೆಯು ರುಚಿಯಾದ ಹಾಗು ಶುಚಿಯಾದ ಉಚಿತ ಮದ್ಯಾಹ್ನ ದ ಊಟದ ಜೊತೆಗೆ ಬೇಯಿಸಿದ ಮೊಟ್ಟೆ, ಶೇಂಗಾ ಚಿಕ್ಕಿ ಅಥವಾ ಬಾಳೆಹಣ್ಣಿನ್ನು ಎಲ್ಲಾ ವಿದ್ಯಾರ್ಥಿಗಳಿಗೆ ಕೊಡುವ ವ್ಯವಸ್ಥೆಯನ್ನ ಹೊಂದಿರುತ್ತದೆ. ಶಾಲೆಯ ಶೈಕ್ಷಣಿಕ ಪ್ರವೇಶವು ಪ್ರತೀ ವರ್ಷ ಏಪ್ರಿಲ್‌ನಲ್ಲಿ ಪ್ರಾರಂಭವಾಗುತ್ತದೆ.

56 ರ ಹರೆಯದ ನಮ್ಮ ಶಾಲೆ ಮಾಡಿದ ಸಾಧನೆಗಳು ಅವೆಷ್ಟೋ.. ಸಾಧನೆಯ ಹಾದಿಯಲ್ಲಿ ನಡೆದ ಹೆಜ್ಜೆಗಳು ಅವೆಷ್ಟು ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ವಿಜ್ಞಾನಿ, ಡಾಕ್ಟರ್‌, ಇಂಜಿನಿಯರ್, ಸಾಹಿತಿ, ಕಲಾವಿದರು ಹಾಗೂ ಉದ್ಯಮಿಗಳಾಗಿ ದೇಶ ವಿದೇಶಗಳಲ್ಲಿ ಸಾಧನೆ ಮಾಡಿ ಸಮಾಜದ ಗಣ್ಯರಲ್ಲಿ ತಮ್ಮನ್ನೂ ಗುರುತಿಸಿಕೊಂಡಿದ್ದಾರೆ.

ಶ್ರೀ ಗಜಾನನ ಸೆಕೆಂಡರಿ ಪ್ರೌಢಶಾಲೆಯ ಕುರಿತು

ನಮ್ಮ ಹೆಮ್ಮೆಯ ಪ್ರೌಢಶಾಲೆಯು 50 ವರ್ಷಗಳಿಂದ ವಿದ್ಯಾ ದಾನದ ಪವಿತ್ರ ಕಾರ್ಯದಲ್ಲಿ ಮುನ್ನಡೆಯುತ್ತಿದೆ. ಹಿರಿಯರ ಪರಿಶ್ರಮ ದಾನ ತ್ಯಾಗಗಳಿಂದ ಪುಣ್ಯ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟು ಕಿರಿಯರ ಬಾಳಿಗೆ ವಿದ್ಯೆ ಹಾಗೂ ಸಂಸ್ಕಾರವನ್ನು ನೀಡಿ ಅರ್ಧ ಶತಮಾನದಿಂದ ಜ್ಞಾನದೀಪ ಬೆಳಗುತ್ತಿದೆ. ಈಗ ಸುವರ್ಣ ಮಹೋತ್ಸವವನ್ನು ಆಚರಿಸಿ ಹಿಂದಿನ ದಿನಗಳನ್ನು ಸ್ಮರಿಸಿಕೊಂಡು ಭವ್ಯ ಭವಿಷ್ಯ ದಿನ ಕನಸುಗಳನ್ನು ಸಾಕಾರಗೊಳಿಸಲು ಮುಂದೆ ಸಾಗುತ್ತಿದೆ.

1966-67 ನೇ ಸಾಲಿನಲ್ಲಿ ಮಲೆನಾಡಿನ ಪುಟ್ಟ ಹಳ್ಳಿ ಶಿರಸಿ ತಾಲೂಕಿನ ಹೆಗಡೆಕಟ್ಟಾದಲ್ಲಿ ಪ್ರೌಢಶಾಲೆ ಸ್ಥಾಪಿಸಲು ಊರಿನ ಹಿರಿಯ ಕಿರಿಯರು ಹಾಗೂ ಸಹಕಾರಿ ಧುರೀಣರಾದ ಶ್ರೀ ಪರಮೇಶ್ವರ ಹೆಗಡೆ ಹೊನ್ನೆಕಟ್ಟಾ ಇವರ ಮುಂದಾಳತ್ವದಲ್ಲಿ ಅವಿರತ ಪ್ರಯತ್ನದೊಂದಿಗೆ ಆರಂಭಿಸಿದರು. ನಮ್ಮ ಪ್ರಯತ್ನಕ್ಕೆ ಕೈ ಜೋಡಿಸಿದವರು ಶಿರಸಿ ಸಮೀಪದ ಯಡಳ್ಳಿ ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿಯವರು. ಯಡಳ್ಳಿ ಮಾಧ್ಯಮಿಕ ಶಾಲೆಯ ಶಾಖೆಯಾಗಿ 14-06-1967 ರಂದು ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟ ಇದನ್ನು ಆರಂಭಿಸಿ ಎಂಟನೇ ತರಗತಿಗೆ ಪ್ರವೇಶ ಪ್ರಾರಂಭಿಸಿದರು. 25 ಎಪ್ರಿಲ್ 1970 ರಂದು ಶ್ರೀ ಪರಮೇಶ್ವರ ಮಹಾಬಲೇಶ್ವರ ಹೆಗಡೆ ಹೊನ್ನೆಕಟ್ಟಾ ಇವರ ಅಧ್ಯಕ್ಷತೆಯಲ್ಲಿ 15 ಸದಸ್ಯರ ಸೆಕೆಂಡರಿ ಸ್ಕೂಲ್ ಎಜುಕೇಶನ್ ಸೊಸೈಟಿ ಹೆಗಡೆಕಟ್ಟ ಇದು ಅಸ್ತಿತ್ವಕ್ಕೆ ಬಂದಿತು.  1971 ರಲ್ಲಿ ಮಾತೃ ಸಂಸ್ಥೆಯಾದ ಯಡಳ್ಳಿ ಸಂಸ್ಥೆಯವರು ಪ್ರೌಢಶಾಲೆಯನ್ನು ಹೆಗಡೆಕಟ್ಟಾ ಸಮಿತಿಗೆ ಹಸ್ತಾಂತರಿಸಿದರು.

ಈ ಸ್ವತಂತ್ರ ಸಂಸ್ಥೆಗೆ ಸ್ಪೂರ್ತಿ ನೀಡಿದ ಒಂದು ಪ್ರಯತ್ನವನ್ನು ನೆನೆಯಲೇಬೇಕು. 1959-60 ರಲ್ಲಿ ಊರ ಹಿರಿಯರಾದ ಶ್ರೀ ಮಂಜುನಾಥ ಹೆಗಡೆ ಮಕ್ಕಳತಾಯಿಮನೆ ಹಾಗೂ ಶ್ರೀ ಗಣಪತಿ ಗೊಡವೆಮನೆ ಇವರ ಮುಂದಾಳತ್ವದಲ್ಲಿ ಹೆಗಡೆಕಟ್ಟಾದಲ್ಲಿ ಪ್ರೌಢ ಶಿಕ್ಷಣ ಆರಂಭವಾಗಿತ್ತು. ಆದರೆ ಇದು ಒಂದೇ ವರ್ಷಕ್ಕೆ ಸ್ಥಗಿತವಾದರೂ ಮುಂದಿನ ಪ್ರಯತ್ನಕ್ಕೆ ಬುನಾದಿ ಹಾಕಿದ್ದು ಸ್ಮರಣ ಅರ್ಹ ಮತ್ತು ಶ್ಲಾಘನೀಯ.

ಯಡಳ್ಳಿ ಶಾಖೆಯಾಗಿ ಪ್ರೌಢಶಾಲೆ ಆರಂಭವಾದರೂ ತರಗತಿಗಳಿಗೆ ಸ್ವಂತ ಕಟ್ಟಡವಿರಲಿಲ್ಲ. 1967  ರಿಂದ 1969 ರ ರ ತನಕ ಶ್ರೀ ಮಂಜುನಾಥ ಹೆಗಡೆ ಮಕ್ಕಳತಾಯಿಮನೆ ಇವರು ಸುಂದರವಾದ ಹೂದೋಟದಲ್ಲಿರುವ ತಮ್ಮ ಸ್ವಂತ ಕಟ್ಟಡ ಶಾಂತಿಧಾಮವನ್ನು ಬಿಟ್ಟುಕೊಟ್ಟರು. ಇದೇ ರೀತಿ ಸ್ಥಳೀಯ ಗ್ರಾಮ ಪಂಚಾಯತ, ಸೇವಾ ಸಹಕಾರಿ ಸಂಘ ಹಾಗೂ ಶ್ರೀ ಗಣಪತಿ ತಿಮ್ಮಯ್ಯ ಹೆಗಡೆ (ಚಾದಂಗಡಿ) ಇವರ ಸ್ವಂತದ ಹೊಸ ಮನೆಯಲ್ಲಿ ತರಗತಿಗಳು ನಡೆದವು.

ನಮ್ಮ ಶಿಕ್ಷಣ ಸಂಸ್ಥೆ ಇಂದು ಸ್ವಂತ ಸುಸಜ್ಜಿತ ಕಟ್ಟಡವನ್ನು ಹೊಂದಿದೆ. ಈ ಕಟ್ಟಡದ ನಿರ್ಮಾಣಕ್ಕಾಗಿ ಶ್ರೀ ಪರಮೇಶ್ವರ ಹೆಗಡೆ ಮತ್ತು ಶ್ರೀ ರಾಮಚಂದ್ರ ಹೆಗಡೆ ಹೊನ್ನೆಕಟ್ಟಾ ಇವರು ಶಿವಗಾಂವ ಬೆಟ್ಟದ ಸ.ನಂ 10ನ್ನು ನೀಡಿ ಕಟ್ಟಡ ಆರಂಭವಾಗಲು ಕಾರಣಿಭೂತರಾದರು.‌ 1971 ರಲ್ಲಿ ಏಳು ಕೊಠಡಿಗಳಿಗಾಗಿ ಭದ್ರ ತಳಪಾಯ ಹಾಕಲಾಯಿತು. ಶಾಲಾ ಕಟ್ಟಡದ ನಿರ್ಮಾಣಕ್ಕೆ ಸ್ಥಳೀಯ ನಾಗರಿಕರು ಅಕ್ಕಪಕ್ಕದ ಗ್ರಾಮಸ್ಥರು ಸಂಘ ಸಂಸ್ಥೆಗಳು ತನು ಮನ ಧನ ಸಹಾಯ ಮಾಡಿದ್ದರು. ಶ್ರೀ ಶ್ರೀಪತಿ ನರಸಿಂಹ ಹೆಗಡೆ, ಕೊಡೆಮನೆ ಇವರು ಮುಖ್ಯಾಧ್ಯಾಪಕರಾಗಿ ಐವರು ಶಿಕ್ಷಕರೊಂದಿಗೆ ಮೂವರು ಶಿಕ್ಷಕೇತರ ಸಿಬ್ಬಂದಿಗಳು ಸರ್ಕಾರದಿಂದ ನೇಮಕಗೊಂಡರು.

1971 ರಲ್ಲಿ ಮೂರು ಕೊಠಡಿಗಳನ್ನು ನಿರ್ಮಿಸಲಾಯಿತು. ಇವುಗಳ ನಿರ್ಮಾಣಕ್ಕೆ ಶ್ರೀ ಪರಮೇಶ್ವರ ಹೆಗಡೆ ಮತ್ತು ಶ್ರೀ ರಾಮಚಂದ್ರ ಹೆಗಡೆ ಹೊನ್ನೆಕಟ್ಟಾ ಸಹೋದರರು ಹಾಗೂ ಶ್ರೀ ತಿಮ್ಮಯ್ಯ ಹೆಗಡೆ, ಶ್ರೀ ಗೋಪಾಲಕೃಷ್ಣ ಹೆಗಡೆ ಶ್ರೀ ಹರಿಹರ ಹೆಗಡೆ ಮರಿಯಜ್ಜನಮನೆ ಸಹೋದರರು ಮತ್ತು ಶ್ರೀ ಗಣಪತಿ ರಾಮಚಂದ್ರ ಹೆಗಡೆ ಗೊಡವೆಮನೆ ಈ ಮೂರು ಕುಟುಂಬದವರು ವಿಶೇಷ ದಾನಿಗಳಾಗಿದ್ದಾರೆ. 1973-74 ರಲ್ಲಿ ಹೆಗಡೆಕಟ್ಟ ಸೇವಾ ಸಹಕಾರಿ ಸಂಘ ,‌ ಶಿರಸಿಯ ತೋಟಗಾರ್ಸ ಸೇಲ್ ಸೊಸೈಟಿ (ಟಿ.ಎಸ್.ಎಸ್) ನೆರವಿನಿಂದ ನಾಲ್ಕನೇ ಕೊಠಡಿ ಪೂರ್ಣಗೊಂಡಿತು. 1978-79 ರಲ್ಲಿ ಶಾಲೆಯ ಪುಟ್ಟ ಸಭಾಭವನ ಪೂರ್ಣಗೊಂಡಿತು. 1988-89 ರಲ್ಲಿ ಮತ್ತೊಂದು ಕೊಠಡಿ ನಿರ್ಮಾಣ ನಿರ್ಮಾಣವಾಯಿತು.. ಫೆಬ್ರುವರಿ 1997 ರಲ್ಲಿ ನಮ್ಮ ಪ್ರೌಢಶಾಲೆ ಬೆಳ್ಳಿ ಹಬ್ಬವನ್ನು ಆಡಳಿತ ಮಂಡಳಿಯು ಊರ ನಾಗರಿಕರ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಶ್ರೀರಾಮಚಂದ್ರ ಹೆಗಡೆ ಹೊನ್ನೇಕಟ್ಟ ಇವರ ಗೌರವಾಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ಆಚರಿಸಿತು.

ಬೆಳೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಶಾಲಾ ಕೊಠಡಿಗಳು ಚಿಕ್ಕದಾಗಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವುದು ಕಷ್ಟ ಎನಿಸಿತು. ಆದ್ದರಿಂದ 2003 ರಿಂದ 2006 ತನಕ ಸುಮಾರು 6 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಿ ಮೂರು ನೂತನ ವಿಶಾಲ ಕೊಠಡಿ ನಿರ್ಮಿಸಿದಾಗ ಸುಸಜ್ಜಿತ ವಿಜ್ಞಾನ ಪ್ರಯೋಗಾಲಯಕ್ಕೆ ಅವಕಾಶವಾಯಿತು. ಅಂದಿನ ಆಡಳಿತ ಮಂಡಳಿಗೆ ನಮ್ಮೆಲ್ಲರ ನೆಚ್ಚಿನ ಮುಖ್ಯಾಧ್ಯಾಪಕರಾದ ಶ್ರೀ ವಿ.ಪಿ ಹೆಗಡೆ ಇವರು ಬೆನ್ನೆಲುಬಾಗಿ ನಿಂತು ಕಟ್ಟಡ ನಿರ್ಮಾಣದಲ್ಲಿ ಹಾಗೂ ಎಲ್ಲಾ ಚಟುವಟಿಕೆಗಳಲ್ಲಿ ಶಾಲೆಯನ್ನು ಮುನ್ನಡೆಸಿದರು.

ಈ ಎಲ್ಲಾ ಕಟ್ಟಡಗಳು ದಾನಿಗಳ ನೆರವಿನಿಂದ ನಿರ್ಮಾಣವಾಗಿದೆ. ಸರಕಾರದ ಸಹಾಯ ನಮಗೆ ಲಭಿಸಿರಲಿಲ್ಲ. ಅಕ್ಷರ ದಾಸೋಹದ ಯೋಜನೆಗಿಂತ ಮೊದಲೇ ಮಧ್ಯಾಹ್ನದ ಬಿಸಿಊಟ ನಮ್ಮ ಶಾಲೆಯಲ್ಲಿ ಪ್ರಾರಂಭವಾಗಿತ್ತು. ಈ ಯೋಜನೆಗೆ ಸರಕಾರ ಕೈಜೋಡಿಸಿದಾಗ ನಾಲ್ಕು ಲಕ್ಷ ರೂಪಾಯಿಗಳಲ್ಲಿ ಬಿಸಿ ಊಟದ ಕೋಣೆ ನಿರ್ಮಾಣವಾಯಿತು. ವಿಶಾಲ ರಂಗಮಂದಿರ ಬಯಲಿನಲ್ಲಿದೆ, ಆದರೆ ನಮ್ಮ ಪ್ರೌಢಶಾಲೆಗೆ ವಿಶಾಲ ಸಭಾಭವನದ ಕೊರತೆ ಆರಂಭದಿಂದಲೂ ಇತ್ತು. ಈಗ ಶೈಕ್ಷಣಿಕ ಚಟುವಟಿಕೆಗಳಿಗೆ, ಪಾಲಕರ ಸಭೆಗೆ, ಯೋಗ, ಪ್ರಾಣಾಯಾಮ ತರಬೇತಿಗಳಿಗೆ ಹಾಗೂ ಎಲ್ಲ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೇಕಾದ ಒಳಾಂಗಣ ಕಟ್ಟಡವನ್ನು ಸುವರ್ಣ ಮಹೋತ್ಸವದ ಸಮಯದಲ್ಲಿ ಪೂರ್ಣಗೊಂಡಿತು. ಈ ಸಭಾಭವನದ ಮೇಲಿನ ಅಂತಸ್ತುಗಳಲ್ಲಿ ಭವಿಷ್ಯದ ಅವಶ್ಯಕತೆಗಳಾದ ಆಂಗ್ಲ ಮಾಧ್ಯಮ ಶಾಲೆ ಪಿಯುಸಿ ತರಗತಿ ನಡೆಸಲು ಅನುವು ಆಗುವಂತೆ ಮೂರು ಅಂತಸ್ತಿನ ಸೌಧ ನಿರ್ಮಿಸುವ ಕನಸು ಶಾಲೆಗೆ ಇದೆ.

ಶೈಕ್ಷಣಿಕ ಶ್ರೇಷ್ಠತೆ ಮತ್ತು ಪ್ರತಿಭೆಯ ಅನಾವರಣ

ಈ ಸಂಸ್ಥೆಯ ಎಸ್ ಎಸ್ ಎಲ್ ಸಿ ಫಲಿತಾಂಶ ನಿರಂತರ ಉತ್ತಮವಾಗಿದ್ದು 2015- 16ನೇ ಸಾಲಿನ ವಾರ್ಷಿಕ ಪರೀಕ್ಷೆಯಲ್ಲಿ ಕುಮಾರಿ ಅಂಜಲಿ ಮಂಜುನಾಥ ಹೆಗಡೆ ಇವಳು ರಾಜ್ಯಕ್ಕೆ ನಾಲ್ಕನೇ ಸ್ಥಾನ ಬಂದಿರುತ್ತಾಳೆ.  ಹಾಗೆಯೇ 2019- 20ನೇ ಸಾಲಿನಲ್ಲಿ ಕುಮಾರಿ ಅಖಿಲ ಭಾಸ್ಕರ ಹೆಗಡೆ ಇವಳು ಸಹ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಕನ್ನಡ ಮಾಧ್ಯಮದಲ್ಲಿ ಎರಡನೇ ಸ್ಥಾನ ಗಳಿಸಿದ್ದು ಅದೇ ವರ್ಷ ಕುಮಾರಿ ಮಹಾಲಸಾ ಪೈ ಇವಳು ರಾಜ್ಯಕ್ಕೆ 7ನೇ ಸ್ಥಾನ ಗಳಿಸಿ ಶಾಲೆಯ ಕೀರ್ತಿ ಹೆಚ್ಚಿಸಿರುತ್ತಾರೆ. 2022- 23ನೇ ಸಾಲಿನಲ್ಲಿ ಕುಮಾರ್ ಧ್ರುವ ಕುಮಾರ್ ಬಿ.ಕೆ ಈತನು ರಾಜ್ಯಕ್ಕೆ 8ನೇ ಗಳಿಸಿದ್ದು 2023-24ನೇ ಸಾಲಿನಲ್ಲಿ ಕುಮಾರಿ ಸೌಖ್ಯ ವಿನಾಯಕ ಹೆಗಡೆ ಇವಳು ರಾಜ್ಯಕ್ಕೆ 10ನೇ ಸ್ಥಾನ ಪಡೆದು ಕೀರ್ತಿ ಪತಾಕೆ ಹಾರಿಸಿರುತ್ತಾರೆ. ಇನ್ನು ಮುಂದೆಯೂ ಸಹ ಈ ಸಾಧನೆ ನಿರಂತರವಾಗಿರಲಿ ಎಂದು ಹಾರೈಸುತ್ತೇವೆ. ಅಲ್ಲದೆ 2007- 08ನೇ ಸಾಲಿನಿಂದ ಪ್ರತಿ ವರ್ಷವೂ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ 90 ಗಿಂತಲೂ ಹೆಚ್ಚು ಫಲಿತಾಂಶ ಮಾಡಿರುವುದು ನಮ್ಮ ಶಾಲೆಯ ಸಾಧನೆ ಎಂದು ಹೇಳಲು ಹೆಮ್ಮೆಯಾಗುತ್ತದೆ.

ಪ್ರತಿಭಾ ಕಾರಂಜಿಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಜನಪದ ನೃತ್ಯ, ಕವ್ಹಾಲಿ, ಕೋಲಾಟ,  ರಸಪ್ರಶ್ನೆ ಸ್ಪರ್ಧೆ, ಮತದಾರರ ಸಾಕ್ಷರತಾ ರಸಪ್ರಶ್ನೆ ಸ್ಪರ್ಧೆ, ಹಿಂದಿ ಭಾಷಣ, ಹಾಸ್ಯ, ಚಿತ್ರಕಲೆ, ರಂಗೋಲಿ, ಛದ್ಮವೇಷ, ಭಗವದ್ಗೀತೆ ಪಠಣ ಮತ್ತು ಭಗವದ್ಗೀತೆಯ ಕುರಿತು ಭಾಷಣ ಸ್ಪರ್ಧೆ, ಸ್ಕೌಟ್ ಮತ್ತು ಗೈಡ್ಸ್ ನಡೆಸುವ ಗೀತ ಗಾಯನ ಸ್ಪರ್ಧೆ,  ವಿಜ್ಞಾನ ವಿಚಾರಗೋಷ್ಠಿ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕುಮಾರಿ ಮಹಾಲಸ ಪೈ ಇವಳು ಕೊಂಕಣಿ ಭಾಷಣ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿಕೊಂಡಿರುವುದು ಪ್ರಶಂಸನೀಯವಾಗಿದೆ. ಅಲ್ಲದೆ ಚಂದನ ವಾಹಿನಿಯಲ್ಲಿ ಎರಡು ಬಾರಿ ನೃತ್ಯ ಪ್ರದರ್ಶನವನ್ನು ನಮ್ಮ ವಿದ್ಯಾರ್ಥಿಗಳು ನೀಡಿರುತ್ತಾರೆ. ಈ ಎಲ್ಲಾ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಡಲು ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿರುತ್ತಾರೆ.

ಉತ್ತಮ ಇತಿಹಾಸ ಹೊಂದಿರುವ ನಮ್ಮ ಪ್ರೌಢಶಾಲೆಯು ಸುವರ್ಣ ಸುರಭಿ ಭವನವನ್ನು ನಿರ್ಮಿಸಿ ಸುವರ್ಣ ಮಹೋತ್ಸವವನ್ನು ಆಚರಿಸಿರುವ ನಮ್ಮ ಶಾಲೆ ಪರಿಪೂರ್ಣವಾಗಿ ಅಭಿವೃದ್ಧಿ ಹೊಂದಿದ ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳೊಂದಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ನೀಡುವ ಮಹಾದಾಸೆಯನ್ನು ಹೊಂದಿದೆ.

ಶ್ರೀಮತಿ ವೀಣಾ ಭಟ್ಟ

ಮುಖ್ಯೋಪಾಧ್ಯರು, ಶ್ರೀ ಗಜಾನನ ಸೆಕೆಂಡರಿ ಸ್ಕೂಲ್ ಹೆಗಡೆಕಟ್ಟಾ

ಮುಖ್ಯೋಪಾದ್ಯಾಯರ ಮನದಾಳದ ಮಾತು

ವಿದ್ವತ್ವಂ ಚ ನೃಪತ್ವಂ ಚ ನೈವ ತುಲ್ಯಂ ಕದಾಚನ |

ಸ್ವದೇಶೆ ಪೂಜ್ಯತೆ ರಾಜ ವಿದ್ವಾನ್ ಸರ್ವತ್ರ ಪೂಜ್ಯತೆ ।।

ರಾಜನು ಕೇವಲ ತನ್ನ ದೇಶದಲ್ಲಿ ಮಾತ್ರ ಗೌರವಿಸಲ್ಪಡುತ್ತಾನೆ, ವಿದ್ವಾಂಸರಾದರೋ ಎಲ್ಲೆಡೆಯೂ ಗೌರವಿಸಲ್ಪಡುತ್ತಾರೆ. ಹೀಗೆ ನಮ್ಮೂರ ಮಕ್ಕಳನ್ನು ಸುಸಂಸ್ಕೃತ ವಿದ್ಯಾವಂತರನ್ನಾಗಿ ಬೆಳೆಸುವ ಆಶಯದೊಂದಿಗೆ ಈ ಭಾಗದ ಎಲ್ಲಾ ಹಿರಿಯರು ದಿವಂಗತ ಪರಮೇಶ್ವರ ಹೆಗಡೆ ಹೊನ್ನೆಕಟ್ಟ ಇವರ ನೇತೃತ್ವದಲ್ಲಿ ಸ್ಥಾಪಿತವಾದ ಶಾಲೆಯೇ ಶ್ರೀ ಗಜಾನನ ಸೆಕೆಂಡ್ ಸ್ಕೂಲ್ ಹೆಗಡೆಕಟ್ಟಾ. ಈ ವಿದ್ಯಾ ಸಂಸ್ಥೆಯು 1997 ರಲ್ಲಿ ಬೆಳಿ ಹಬ್ಬವನ್ನು 2023ರಲ್ಲಿ ಸುವರ್ಣ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ಆಚರಿಸಿಕೊಂಡು ತಾಲೂಕಿನ ಪ್ರಮುಖ ವಿದ್ಯಾ ಸಂಸ್ಥೆಯಾಗಿ ಬೆಳೆದಿದೆ. ಇಲ್ಲಿಯವರೆಗೆ ಸುಮಾರು ನಾಲ್ಕು ಸಾವಿರ ಮಕ್ಕಳಿಗೆ ಜ್ಞಾನದ ಬೆಳಕಾಗಿ ವಿದ್ಯಾ ದಾನ ಮಾಡಿದ ಈ ಶಾಲೆಯ ಹಳೆಯ ವಿದ್ಯಾರ್ಥಿಗಳು ಸಮಾಜದಲ್ಲಿ ಸುಸಂಸ್ಕೃತ ನಾಗರಿಕರಾಗಿ ವಿವಿಧ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿದ್ದು ಈಗಲೂ ಶಾಲೆಯ ಸಂಪರ್ಕದಲ್ಲಿರುವುದು ಸಂತೋಷದ ಸಂಗತಿ. ಶಾಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರಾಂಕ್ ವಿಜೇತರ ಸಂಖ್ಯೆ ಹೆಚ್ಚುತ್ತಿದೆ. ಕ್ರೀಡೆ ಸಾಂಸ್ಕೃತಿಕ ಹಾಗೂ ಇತರೆ ಸ್ಪರ್ಧೆಗಳಲ್ಲಿ ಪ್ರತಿವರ್ಷವೂ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗುತ್ತಿದ್ದು ನಾವೆಂದು ಸಾಧಕರೇ ಎಂಬುದನ್ನು ಸಾದರಪಡಿಸುತ್ತಿದ್ದಾರೆ. ಪ್ರಸ್ತುತ ಶಾಲೆಯಲ್ಲಿ ಏಳು ಶಿಕ್ಷಕರು (ಮುಖ್ಯ ಅಧ್ಯಾಪಕರು ಸೇರಿ) ಇಬ್ಬರು ಸಿಬ್ಬಂದಿಗಳು ಇದ್ದು ಒಂದು ನೂರ ಐವತ್ತೊಂಬತ್ತು ವಿದ್ಯಾರ್ಥಿಗಳಿಗೆ ಸಂಸ್ಕಾರಯುತ  ಶಿಕ್ಷಣ ನೀಡುತ್ತಿದ್ದಾರೆ. ಶೌಚಾಲಯಗಳು, ಕುಡಿಯುವ ನೀರು, ಬಿಸಿಊಟ, ಕಂಪ್ಯೂಟರ್ ಶಿಕ್ಷಣ, ಸುಸಜ್ಜಿತ ಸಭಾಭವನ, ಕ್ರೀಡಾಮೈದಾನ ಇತ್ಯಾದಿ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ನಮ್ಮ ಶಾಲೆ ಉತ್ತಮ ಆಡಳಿತ ಮಂಡಳಿಯ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.

ನಮ್ಮ ಪ್ರೌಢ ಶಾಲೆ ಯಲ್ಲಿ ಮುಖ್ಯೋಪಾದ್ಯಾಯರಾಗಿ ಕಾರ್ಯನಿರ್ವಹಿಸಲು ನನಗೆ ನಿಜವಾಗಿಯೂ ಹೆಮ್ಮೆ ಯನಿಸುತ್ತದೆ. ಇಲ್ಲಿನ ಸಮುದಾಯಕ್ಕೆ ಸೇವೆ ಸಲ್ಲಿಸಲು ನನಗೆ ಅವಕಾಶ ನೀಡಿದ ಆಡಳಿತ ಮಂಡಳಿಗೆ ಹೃತ್ಪೂರ್ವಕ ಧನ್ಯವಾದ ಹೇಳಲು ಬಯಸುತ್ತೇನೆ.‌ ಪ್ರೌಢಶಾಲೆಯಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವುದು ನನ್ನ ದ್ಯೇಯ. ನಮ್ಮ ಶಿಕ್ಷಣ ವ್ಯವಸ್ಥೆಯು ನಮ್ಮ ವಿದ್ಯಾರ್ಥಿಗಳ ವೈಯಕ್ತಿಕ ಅಗತ್ಯಗಳನ್ನು ಪೂರೈಸುತ್ತದೆ. ಸಮರ್ಥ ಶಿಕ್ಷಕರು, ಅತ್ಯಾಧುನಿಕ ಮೂಲಸೌಕರ್ಯ, ಅನುಭವಿ ಮತ್ತು ದಕ್ಷ ನಿರ್ವಹಣೆ, ಸುರಕ್ಷಿತ ಮತ್ತು ಬೆಂಬಲದ ವಾತಾವರಣವನ್ನು ಹೊಂದಿದ್ದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ, ಕ್ರೀಡೆ, ಕಲಾತ್ಮಕ ಮತ್ತು ಸಾಮಾಜಿಕ ಅವಕಾಶಗಳ ಪರಿಪೂರ್ಣ ಸಮತೋಲನವನ್ನು ಒದಗಿಸುತ್ತದೆ. ನಮ್ಮ ಸಂಸ್ಥೆಯ ನಿಜವಾದ ಕಾಳಜಿ ಏನೆಂದರ ವಿದ್ಯಾರ್ಥಿಗಳ ಬೌದ್ಧಿಕ ಉತ್ಕೃಷ್ಟತೆಯ ಜೊತೆಗೆ ಭಾವನಾತ್ಮಕ ಬೆಳವಣಿಗೆಯನ್ನು ಖಚಿತಪಡಿಸುವುದು. ಇದು ಅವರ ಸ್ವಾಭಿಮಾನ, ಸ್ವಯಂ ಅರಿವು ಮತ್ತು ಆತ್ಮ ವಿಶ್ವಾಸವನ್ನು ಅಭಿವೃದ್ಧಿಪಡಿಸಲು ಅವರಿಗೆ ಅಧಿಕಾರ ನೀಡುತ್ತದೆ. ಶಿಸ್ತು, ಮೌಲ್ಯಗಳು ಮತ್ತು ಸಮಗ್ರತೆಯು ಈ ಸಂಸ್ಥೆಯ ಅಡಿಪಾಯವಾಗಿದೆ. ನಮ್ಮ ಉದ್ದೇಶವು ಆತ್ಮಸಾಕ್ಷಿಯ, ಆತ್ಮವಿಶ್ವಾಸದ ನಾಗರಿಕರನ್ನು ಉತ್ಪಾದಿಸುವುದು, ಅವರು ದೇಶ ವಿದೇಶಗಳಲ್ಲಿ ಉತ್ತಮ ಸಾಧನೆಯನ್ನ ಮಾಡಿ ಶಾಲೆಗೆ ಹೆಮ್ಮೆ ತರಲಿ ಎಂದು ಆಶಿಸುವುದು.

ಮಲೆನಾಡಿನ ಸುಂದರ ಪರಿಸರದಲ್ಲಿರುವ ನಮ್ಮ ಪ್ರೌಢಶಾಲೆಯು ಜ್ಞಾನ ದೇಗುಲವಾಗಿ ಹಿಂದಿನ ಪರಂಪರೆಗಳೊಂದಿಗೆ ಹೊಸತನವನ್ನು ಅಳವಡಿಸಿಕೊಂಡು “ಚಾರಿತ್ರ್ಯ ನಿರ್ಮಾಣವೇ ಶಿಕ್ಷಣದ ಮುಖ್ಯ ಗುರಿ”  ಎನ್ನುವ ತನ್ನ ಧ್ಯೇಯ ವಾಕ್ಯದಂತೆ ಮುನ್ನಡೆಯುತ್ತಿದೆ. ಶಿಕ್ಷಕರ ಕರ್ತವ್ಯ ಪ್ರಜ್ಞೆ, ವಿದ್ಯಾರ್ಥಿಗಳ ಶಿಸ್ತು, ಪಾಲಕರ ಬೆಂಬಲ, ಆಡಳಿತ ಮಂಡಳಿಯ ಕ್ರಿಯಾಶೀಲತೆ ನಮ್ಮ ಶಾಲೆಯ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೇರಿಸಲಿ.  ಬನ್ನಿ, ನಮ್ಮ ಶ್ರದ್ಧೆ ಮತ್ತು ಸಮರ್ಪಣೆಯ ಮೂಲಕ ಈ ಸಂಸ್ಥೆಯನ್ನು ಆಧುನಿಕ ಕಲಿಕೆಯ ದೇವಾಲಯವನ್ನಾಗಿ ಮಾಡೋಣ. ನಿಮ್ಮೆಲ್ಲರಿಗೂ ಹಾರೈಕೆಯನ್ನ ಆಶಿಸುತ್ತಾ.

ಅಧ್ಯಾಪಕ ವೃಂದ

ಶ್ರೀಮತಿ ವೀಣಾ ಭಟ್ಟ

ಮುಖ್ಯ ಶಿಕ್ಷಕರು
ವಿಷಯ - ಇಂಗ್ಲೀಷ್

ಶ್ರೀ ಮಂಜುನಾಥ್ H. ನಾಯಕ್

ದೈಹಿಕ ಶಿಕ್ಷಣ ಶಿಕ್ಷಕರು
ವಿಷಯ - ದೈಹಿಕ ಶಿಕ್ಷಣ

ಶ್ರೀ ಮಹಾದೇವ S ಗೌಡ

ಕನ್ನಡ ಶಿಕ್ಷಕರು
ವಿಷಯ - ಕನ್ನಡ

ಶ್ರೀ ರಘುಪತಿ N. ಹೆಗಡೆ

ಸಮಾಜ ವಿಜ್ಞಾನ ಶಿಕ್ಷಕರು
ವಿಷಯ - ಸಮಾಜ ವಿಜ್ಞಾನ

ಶ್ರೀ ಕೃಷ್ಣ N. ನಾಯ್ಕ

ಗಣಿತ ಶಿಕ್ಷಕರು
ವಿಷಯ - ಗಣಿತ

ಶ್ರೀಮತಿ ಸೌಮ್ಯ ಭಟ್ಟ

ಹಿಂದಿ ಶಿಕ್ಷಕಿ
ವಿಷಯ - ಹಿಂದಿ

ಶ್ರೀಮತಿ ಸ್ವಾತಿ ಗೌಡರ್

ಅತಿಥಿ ಶಿಕ್ಷಕಿ
ವಿಷಯ - ವಿಜ್ಞಾನ